ಭಾರತೀಯ ಚಿತ್ರರಂಗದಲ್ಲಿ ಬಯೋಪಿಕ್ ಚಿತ್ರಗಳು
ನಿರ್ಮಾಣವಾಗುತ್ತಿರುತ್ತದೆ. ಮುಖ್ಯವಾಗಿ ತೆಲುಗು, ಹಿಂದಿ, ತಮಿಳು ಚಿತ್ರರಂಗಗಳಲ್ಲಿ ಬಯೋಪಿಕ್ ಸಿನಿಮಾಗಳ
ನಿರ್ಮಾಣ ಹೆಚ್ಚಿದೆ. ಕನ್ನಡದಲ್ಲಿ ಬಯೋಪಿಕ್ ಚಿತ್ರಗಳು ಬರೋದೇ ಕಮ್ಮಿಯಾಗಿದೆ. ಆದರೆ ಈಗ ಕನ್ನಡದಲ್ಲೂ
ಒಂದು ಐಕಾನಿಕ್ ಚಿತ್ರ ಸೆಟ್ಟೇರಿದೆ. ಅದೇ ‘ಇಮ್ಮಡಿ ಪುಲಿಕೇಶಿ’ಯ ಜೀವನಾಧಾರಿತ ಚಿತ್ರ.
6ನೇ ಶತಮಾನದಲ್ಲಿ ಆಳ್ವಿಕೆ ಮಾಡಿದ ಚಾಲುಕ್ಯ
ಸಾಮ್ರಾಜ್ಯದ ದೊರೆ, ದಕ್ಷಿಣ ಪಥೇಶ್ವರ ಇಮ್ಮಡಿ ಪುಲಿಕೇಶಿ ಅವರ ಜೀವನ ಚರಿತ್ರೆಯನ್ನು ತೆರೆಯ ಮೇಲೆ
ತರೋದಕ್ಕೆ ಸಕಲ ಸಿದ್ದತೆಗಳು ಆಗುತ್ತಿವೆ ಜೊತೆಗೆ ಚಿತ್ರಕ್ಕೆ ಈಗಾಗಲೇ ‘ಎರೆಯ’ ಎಂಬ ಟೈಟಲ್ ಕೂಡ ಫೈನಲ್
ಮಾಡಲಾಗಿದೆ.
ಇಮ್ಮಡಿ ಪುಲಿಕೇಶಿ ಸಾಹಸಗಾಥೆಯ ‘ಎರೆಯ’
ಸಿನಿಮಾವನ್ನು ವಿಂಗ್ ಸ್ಪ್ಯಾನ್ ಮೋಷನ್ ಪಿಕ್ಚರ್ಸ್ LLP ನಿರ್ಮಾಣ ಮಾಡುತ್ತಿದೆ. ಈ ಮೂಲಕ ಒಂದು ಸಾಸಹಗಾಥೆಗೆ
ಸಾಕ್ಷಿಯಾಗಿದೆ. ಸುನೀತ್ ಜಾವಡೇಕರ್ ಮತ್ತು ನಿವೇದಿತಾ ಕೊಠಾರೆ ‘ಎರೆಯ’ ಸಿನಿಮಾ ನಿರ್ಮಾಣಕ್ಕೆ ಕೈ
ಹಾಕಿದ್ದಾರೆ. ಇಮ್ಮಡಿ ಪುಲಿಕೇಶಿಯ ಸಾಹಸ, ಚಾತುರ್ಯವನ್ನು ಮತ್ತು ಉತ್ತಮ ಆಡಳಿತವನ್ನು ತೆರೆಮೇಲೆ
ಹೇಳಲಾಗುತ್ತಿದೆ. ಇಮ್ಮಡಿ ಪುಲಿಕೇಶಿಯ ಕಾಲವನ್ನು ಒಂದು ಸುವರ್ಣಯುಗ ಎಂದೇ ಹೇಳಲಾಗುತ್ತದೆ. ಡಾ. ಭೂಷಣ್
ಶಾನಭಾಗ್ ಅವರ ಆಳವಾದ ಸಂಶೋಧನೆಯನ್ನು ಆಧಾರವಾಗಿಟ್ಟುಕೊಂಡು ಚಿತ್ರಕತೆಯನ್ನ ತಯಾರಿಸಲಾಗಿದೆ.
![]() |
| ನಿರ್ದೇಶಕ ಕೆ.ಎಂ.ಚೈತನ್ಯ |
ಈ ಮೂವಿಯನ್ನ ಕೆ.ಎಂ.ಚೈತನ್ಯ ನಿರ್ದೇಶನ
ಮಾಡುತ್ತಿದ್ದಾರೆ. ಇವರು ಕನ್ನಡದಲ್ಲಿ ಸುಮಾರು 8 ಯಶಸ್ವಿ ಚಿತ್ರಗಳನ್ನ ನಿರ್ದೇಶಿಸಿದ್ದಾರೆ. ‘ಆ
ದಿನಗಳು’ ಸಿನಿಮಾ ಮೂಲಕ ಕನ್ನಡದಲ್ಲಿ ನಿರ್ದೇಶನವನ್ನು ಆರಂಭಿಸಿದ್ದಾರೆ. ಇತ್ತೀಚೆಗೆ ಮರಿ ಟೈಗರ್
ವಿನೋದ್ ಪ್ರಭಾಕರ್ ನಟನೆಯ ‘ಬಲರಾಮನ ದಿನಗಳು’ ಚಿತ್ರವನ್ನು ನಿರ್ದೇಶಿಸಿ ಈ ವರ್ಷ ಬಿಡುಗಡೆಗೆ ತಯಾರಿ
ನಡೆಸುತ್ತಿದ್ದಾರೆ.
ಪ್ಯಾನ್ ಇಂಡಿಯಾ ಮಟ್ಟದಲ್ಲಿ ಪ್ರೇಕ್ಷಕರ
ಸೆಳೆಯಲು ಬೃಹತ್ ಪ್ರಮಾಣದಲ್ಲಿ ತೆರೆಯ ಮೇಲೆ ಬರಲು ‘ಎರೆಯ’ ಚಿತ್ರವನ್ನು ಹಿಂದಿ ಜೊತೆಗೆ ದಕ್ಷಿಣ
ಭಾರತದ ಭಾಷೆಗಳಲ್ಲೂ ನಿರ್ಮಿಸಲಾಗುತ್ತಿದೆ. ಈ ಚಿತ್ರಕ್ಕೆ ರಾಷ್ಟ್ರದ ಎಲ್ಲಾ ಭಾಗಗಳಿಂದ ತಾರಾಬಳಗವನ್ನು
ಒಳಗೊಂಡಿದ್ದು, ಅತ್ಯಂತ ನುರಿತ ತಂತ್ರಜ್ಞರ ತಂಡ ಇದನ್ನು ತೆರೆಯ ಮೇಲೆ ತರಲು ಸಿದ್ದತೆ ನಡೆಸುತ್ತಿದೆ.
ಚಿತ್ರದ ಪ್ರಮುಖ ನಟರ ಆಯ್ಕೆ ಮತ್ತು ತಾಂತ್ರಿಕ
ತಂಡದ ವಿವರಗಳನ್ನು ಶೀಘ್ರದಲ್ಲೇ ಅಧಿಕೃತವಾಗಿ ಪ್ರಕಟಿಸಲಾಗುತ್ತದೆ. ‘ಎರೆಯ’ ಸಿನಿಮಾ ಇತಿಹಾಸದ ಪುಟಗಳಲ್ಲಿ
ಕಳೆದು ಹೋದ ಭಾರತದ ಶ್ರೇಷ್ಠ ಚಕ್ರವರ್ತಿಯನ್ನ ತೆರೆಯ ಮೇಲೆ ನೋಡುವ ಒಂದು ಮುಖ್ಯ ಚಿತ್ರವಾಗಲಿದೆ.


Comments
Post a Comment